ಮಾತಿನ ಮಹತ್ವ
ಮಾತು ಬೆಳ್ಳಿ;ಮೌನ ಬಂಗಾರ ಎಂಬ ಉಕ್ತಿಯು ಸತ್ಯವಾದರೂ 'ಮಾತು' ನಮ್ಮ ಜೀವನದ ಅತೀ ಮುಖ್ಯ -
ಅವಿಭಾಜ್ಯ ಅಂಗ. ಮಾತು ಸ್ನೇಹದ ದಾರವನ್ನೂ ಹೊಸೆಯಬಲ್ಲುದು, ದ್ವೇಷದ ದ್ವಾರವನ್ನೂ
ತೆರೆಯಬಲ್ಲುದು. ಸಮರ ಸಾರುವುದಾಗಲೀ, ಶಾಂತಿ - ಸಂಧಾನವಾಗಲೀ ಎರಡನ್ನೂ ಸಾಧಿಸುವುದು
ಮಾತಿನ ಸಾಮರ್ಥ್ಯ. ಒಳ್ಳೆಯ ಮಾತು ಪರನಿಂದನೆಯನ್ನು ತಪ್ಪಿಸುತ್ತದೆ, ಹಾಗೆಯೇ
ಪರನಿಂದನೆಯು ಎಂದೂ ಒಳ್ಳೆಯ ಮಾತಾಗುವುದಿಲ್ಲ! ಪ್ರಖ್ಯಾತ ತತ್ತ್ವಜ್ಞಾನಿಯಾದ
ಸಾಕ್ರೆಟಸನು ಉಪಯುಕ್ತವೂ ಉತ್ತಮವೂ ಆದ ಮಾತುಗಳನ್ನು ಬಹುವಾಗಿ ಪ್ರಶಂಸಿಸಿ
ಪ್ರೋತ್ಸಾಹಿಸಿದ್ದಾನೆ. ಆತನ ಜೀವನದಲ್ಲೇ ನಡೆದ ಈ ಕೆಳಗಿನ ಘಟನೆಯು ಅದನ್ನು
ನಿರೂಪಿಸುತ್ತದೆ.
ಅಪರಿಚಿತ ವ್ಯಕ್ತಿಯೊಬ್ಬ ಒಮ್ಮೆ ಸಾಕ್ರೆಟಸನ್ನು ಭೇಟಿಯಾಗಿ ಅತ್ಯುತ್ಸಾಹದಿಂದ ಕೇಳುತ್ತಾನೆ "ನಿಮ್ಮ ಶಿಷ್ಯಂದಿರಲ್ಲೊಬ್ಬನ ಬಗ್ಗೆ ನಾನೇನನ್ನು ಕೇಳ್ಪಟ್ಟೆನೆಂದು ನಿಮಗೆ ತಿಳಿದಿದೆಯಾ?" ಅದಕ್ಕೆ ಸಾಕ್ರೆಟಸನು "ಸ್ವಲ್ಪ ಸಾವಧಾನವಿರಲಿ, ನೀನು ಕೇಳ್ಪಟ್ಟ ವಿಷಯವನ್ನು ನಾನು ಕೇಳುವ ಮೊದಲು ನಿನಗೆ ಮೂರು ಹಂತಗಳ ಒಂದು ಸಣ್ಣ ಪರೀಕ್ಷೆಯನ್ನು ಮಾಡುತ್ತೇನೆ, ನನ್ನ ಶಿಷ್ಯನ ಬಗ್ಗೆ ನೀನಾಡಬಯಸಿರುವ ಮಾತುಗಳು ನನ್ನ ಪರೀಕ್ಷೆಯ ಶೋಧಕಗಳನ್ನು ಹಾದು ಬರಲಿ. 'ಸತ್ಯ'ವು ಮೊದಲ ಶೋಧಕ. ನೀನೀಗ ನನಗೆ ಹೇಳಹೊರಟಿರುವುದು ಸರ್ವಥಾ ಸತ್ಯವೇ ಎಂಬುದನ್ನು ಖಚಿತಪಡಿಸಿಕೊಂಡಿರುವೆಯಾ?" ಎನ್ನುತ್ತಾನೆ. ಆತನು "ಇಲ್ಲ.. ಅದರ ಬಗ್ಗೆ ಕೇಳಿದ್ದೇನೆ ಅಷ್ಟೇ" ಎಂದನು. ಅದಕ್ಕೆ ಸಾಕ್ರೆಟಸನು "ಹಾಗಾದರೆ ನಿನಗೆ ಈ ವಿಷಯದ ಸತ್ಯಾಸತ್ಯತೆಯ ಅರಿವಿಲ್ಲವೆಂದಾಯಿತು, ಇರಲಿ.. ನೀನು ನನ್ನ ಶಿಷ್ಯನ ಬಗೆಗೆ ಒಳ್ಳೆಯದನ್ನೇನಾದರೂ ಹೇಳಬೇಕೆಂದಿರುವೆಯಾ? ಏಕೆಂದರೆ ನನ್ನ ಎರಡನೇ ಹಂತದ ಪರೀಕ್ಷೆಯ ಶೋಧಕವು 'ಒಳ್ಳೆತನ'ವಾಗಿರುತ್ತದೆ" ಎಂದನು. ಅದಕ್ಕೆ ಆ ವ್ಯಕ್ತಿಯು "ಇಲ್ಲ.. ಒಳ್ಳೆಯ ವಿಷಯವಂತೂ ಅಲ್ಲ" ಎಂದು ಉಸುರಿದನು. ಅದಕ್ಕೆ ಆ ಮಹಾ ತತ್ತ್ವಜ್ಞಾನಿಯು "ನೀನು ಹೇಳುತ್ತಿರುವ ಮಾತು ಸತ್ಯವೋ ಅಲ್ಲವೋ ಎಂಬುದು ನಿನಗೆ ತಿಳಿಯದಿದ್ದರೂ ನನ್ನ ಶಿಷ್ಯನ ಬಗ್ಗೆ ಕೆಟ್ಟ ವಿಷಯವೊಂದನ್ನು ಹೇಳಹೊರಟಿರುವೆಯೆಂದಾಯಿತು" ಎಂದನು. ಆಗ ಆ ವ್ಯಕ್ತಿಯ ಮುಖದಲ್ಲಿ ಸಂಕೋಚವು ಕಾಣಲಾರಂಭಿಸಿತು. ಮಾತು ಮುಂದುವರೆಸಿದ ಸಾಕ್ರೆಟಸನು "ಇಷ್ಟಾದರೂ ನೀನು ನನ್ನ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆಂದರೆ ಮುರನೇ ಹಂತದ 'ಉಪಯುಕ್ತತೆ' ಎಂಬ ಶೋಧಕದಲ್ಲಿ ಯಶಸ್ವಿಯಾಗಿ ಹಾಯಬೇಕಾಗುತ್ತದೆ. ನೀನು ನನ್ನ ಶಿಷ್ಯನ ಬಗ್ಗೆ ನನ್ನಲ್ಲಿ ಹೇಳುವ ವಿಷಯದಿಂದ ನನಗೇನಾದರೂ ಉಪಯೋಗವಾಗುವ ಸಾಧ್ಯತೆಯಿದೆಯಾ?" ಎಂದು ಮಾರ್ಮಿಕವಾಗಿ ಪ್ರಶ್ನಿಸಿದನು. ಅದಕ್ಕೆ "ಇಲ್ಲ... ಅಂತಹ ಪ್ರಯೋಜನಕಾರಿಯೇನಲ್ಲ" ಎಂದು ಆ ಅಪರಿಚಿತ ವ್ಯಕ್ತಿಯು ಹೇಳಿದನು. ಆಗ ಸಾಕ್ರೆಟಸನು "ನೀನು ನನಗೆ ಹೇಳಬಯಸುತ್ತಿರುವುದು ಸತ್ಯವೂ ಅಲ್ಲದ, ಒಳ್ಳೆಯದೂ ಅಲ್ಲದ, ಉಪಯುಕ್ತವೂ ಅಲ್ಲದ ವಿಷಯವೆಂದ ಮೇಲೆ ಅದನ್ನು ನನ್ನಲ್ಲಿ ಹೇಳುವುದರ ಔಚಿತ್ಯವಾದರೂ ಏನು" ಎಂದು ಕೇಳುತ್ತಾ ಮಾತು ಮುಗಿಸುತ್ತಾನೆ. ಹೀಗೆ ಯಾರೊಬ್ಬರೂ ನಿರುಪಯುಕ್ತವೂ, ಅಯೋಗ್ಯವೂ ಆದ ಪರನಿಂದನೆಯನ್ನು ಮಾಡಬಾರದೆಂಬ ನೀತಿಯನ್ನು ಸಾಕ್ರೆಟಸನು ಆ ವ್ಯಕ್ತಿಗೆ ತಿಳಿಹೇಳಿದನು.
ಇದೇ ರೀತಿ ಮಹಾತ್ಮ ವಿಧುರರೂ ಸಹ ಯಾರು ಪರನಿಂದನೆ ಮಾಡುವುದಿಲ್ಲವೋ, ಚಾಡಿ ಮಾತುಗಳನ್ನಾಡುವುದಿಲ್ಲವೋ ಅಂತಹವರು ಸದಾಸುಖಿಗಳಾಗಿರುವರೆಂದು ಹೇಳಿದ್ದಾರೆ. ಯಾರೊಬ್ಬರ ಬಗ್ಗೆಯೂ ಸಂಪೂರ್ಣವಾಗಿ ತಿಳಿದುಕೊಳ್ಳದೆ ಇನ್ನೊಬ್ಬರಿಗೆ ಹೇಳುವುದು ಎಂದಿಗೂ ನೈತಿಕತೆಯಾಗದು. ನಮ್ಮ ಧರ್ಮ ಗ್ರಂಥಗಳಿಂದಲೂ, ನೀತಿ ಭೋದಕರಿಂದಲೂ ಇಂತಹ ಚಾಡಿ ಮಾತುಗಳಿಗೆ ವಿರೋಧವಿದೆ. ನಾವು ನುಡಿಯುವ ಪ್ರತೀ ಮಾತೂ ಸತ್ಯವೇ ಆಗಿರಬೇಕೆಂದು ವೇದ ಶಾಸ್ತ್ರಗಳು ಪ್ರತಿಪಾದಿಸುತ್ತವೆ. ಸತ್ಯವನ್ನು ಮರೆಮಾಚುವುದೂ ಸಹ ಅಸತ್ಯವನ್ನಾಡುವುದಕ್ಕೆ ಸಮವೆಂದೂ ಅವು ಸಿದ್ಧಪಡಿಸುತ್ತವೆ. ಹಾಗಾಗಿಯೇ ಮೌನವು ಸದಾಕಾಲ ಸುವರ್ಣವಲ್ಲ! ನಾವು ತಪ್ಪುಗಳ ವಿರುದ್ಧ ಧ್ವನಿಯೆತ್ತಬೇಕು. ಅನ್ಯಾಯ, ಅಧರ್ಮ, ಅಪರಾಧಗಳಾದಾಗಲೂ ಮೌನವಾಗಿರುವುದು ಅಂತಹ ಹೇಯ ಕೃತ್ಯಗಳನ್ನೆಸಗಿದವರಷ್ಟೇ ನಮ್ಮನ್ನೂ ದೋಷಿಗಳನ್ನಾಗಿಸುತ್ತದೆ.
ಪೂರ್ವ ಜನ್ಮಗಳಲ್ಲಿ ಮಾಡಿದ ಪುಣ್ಯ ಕಾರ್ಯಗಳ ಫಲದಿಂದ ಮಾತ್ರವೇ ಮಾನವ ಜನ್ಮ ಲಭ್ಯವೆಂಬುದು ನಮ್ಮ ಹಿರಿಯರ ನಂಬಿಕೆ. ಹಾಗಾಗಿ 'ಮಾನವ ಜನ್ಮ ದೊಡ್ಡದು!' ನಾವು ಕಂಡಂತೆ ಭೂಮಿಯ ಮೇಲಿನ ಸಕಲ ಚರಾಚರ ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರವೇ 'ಮಾತು' ಒಲಿದಿರುವುದು! ಇಂತಹ ಮಾತಿನ ಶಕ್ತಿಯನ್ನು ನಾವು ದುರುಪಯೋಗಪಡಿಸಿಕೊಳ್ಳಬಾರದು. ಇತರರಿಗೆ ನೋವುಂಟುಮಾಡುವ, ಕೆಟ್ಟ ಮಾತುಗಳನ್ನಾಡುವುದನ್ನು ಬಿಟ್ಟುಬಿಡಬೇಕು. ಕಹಿಯೇ ಆದರೂ ಸತ್ಯವನ್ನೇ ನುಡಿಯುವುದು ಒಳ್ಳೆಯದು, ಆದರೆ ಸತ್ಯವಾದ ಮಾತುಗಳು ಸಿಹಿಯು ಆದರೆ ಎಷ್ಟು ಚೆಂದ! ತಿಳಿದವರು ಹೀಗೆ ಹೇಳಿದ್ದಾರೆ "ನಿಮ್ಮ ಆಲೋಚನೆಗಳ ಬಗೆಗೆ ಗಮನವಿರಲಿ, ಅವೇ ನಿಮ್ಮ 'ಮಾತು'ಗಳಾಗಿ ಬದಲಾಗುತ್ತವೆ ; ನಿಮ್ಮ 'ಮಾತು'ಗಳ ಮೇಲೆ ಹತೋಟಿಯಿರಲಿ, ಅವೇ ಮುಂದೆ ಕಾರ್ಯರೂಪಕ್ಕೆ ಬರುತ್ತವೆ ; ನಿಮ್ಮ ಕೆಲಸಗಳ ಬಗ್ಗೆ ಗಮನವಿರಲಿ, ಅವೇ ನಿಮ್ಮ ಹವ್ಯಾಸಗಳಾಗುತ್ತವೆ ; ನಿಮ್ಮ ಹವ್ಯಾಸಗಳ ಮೇಲೆ ಹತೋಟಿಯಿರಲಿ, ಅವೇ ನಿಮ್ಮ ಬದುಕಿನ ಗುರಿಯನ್ನೂ, ಗತಿಯನ್ನೂ ತೀರ್ಮಾನಿಸುತ್ತವೆ." ಇದು ಮಾತಿನ ಮಹತ್ವ. ಸಕಲರಲ್ಲೂ ಪ್ರೇಮವನ್ನು ಬೆಳೆಸಿಕೊಳ್ಳಬೇಕು, ವಿಶ್ವಮಾನವರಾಗಬೇಕು. ಬಸವಣ್ಣನವರ ವಚನವು ಹೇಳುವಂತೆ "ನುಡಿದರೆ ಮುತ್ತಿನ ಹಾರದಂತಿರಬೇಕು ; ನುಡಿದರೆ ಮಾಣಿಕ್ಯ ದೀಪ್ತಿಯಂತಿರಬೇಕು ; ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು ; ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ; ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ ಕೂಡಲಸಂಗಮದೇವ." ಕಡೆಯವರೆಗೂ ಉಳಿಯುವುದು ಸತ್ಯವೇ ಹೊರತು ಅಸತ್ಯವಲ್ಲ.
(ಪ್ರಸ್ತುತ ಲೇಖನವು 'Times of India' ದ 'speaking tree' ಯೊಂದರ ಭಾವಾನುವಾದ.)