ಇದು ಕನ್ನಡ ರಾಜ್ಯೋತ್ಸವದ ಮಾಸಾಚರಣೆ - ವರ್ಷಕ್ಕೊಮ್ಮೆಯಾದರೂ ಮಾಡಲು ಕನ್ನಡದ ಸ್ಮರಣೆ
ಮಾಡುತ್ತಾ ಮಾಡುತ್ತಾ ಅವರಿವರ ಅನುಕರಣೆ - ಮಾಡುತಿರಲು ಮಾತೃಭಾಷೆಯ ಕಡೆಗಣನೆ;
ಭಾಷಾಭಿಮಾನದ ಉದ್ದುದ್ದ ಭಾಷಣಗಳ ಒಕ್ಕಣೆ - ನಡುನಡುವೆಯೇ ಇಂಗ್ಲಿಷ್ ನ ಒಗ್ಗರಣೆ
ಕೊಡಲಾದೀತೇ ಇದಕೆ ವಿವರಣೆ - ಕಡಿಮೆ ಮಾಡಲಾದೀತೇ ಕನ್ನಡಮ್ಮನ ಬವಣೆ ?
ಬೇರೆ ಭಾಷೆಗಳ ಬಗೆಗೆ ನಮಗೇನಿಲ್ಲ ಆಕ್ಷೇಪಣೆ - ನಮ್ಮ ಭಾಷೆ ನಾವಾಡಲೂ ನಮಗೇ ಬೇಕೇ ಪ್ರೇರಣೆ ?!
ಕನ್ನಡಕ್ಕಿದೆ ಶಾಸ್ತ್ರೀಯ ಭಾಷೆಯೆಂಬ ಮನ್ನಣೆ - ಸಾಲು ಸಾಲು ಸಮ್ಮಾನ ಪೀಠಗಳ ಪ್ರಕಟಣೆ, ಜಮಾವಣೆ
ದಿನ ಬೆಳಗಾದರೆ ರಾಜಕಾರಣಿಗಳ ಭಾಷಾ ಚುನಾವಣೆ - ಆದರೂ ಮುಚ್ಚುತ್ತಿರುವ ಕನ್ನಡ ಶಾಲೆಗಳಿಗಿಲ್ಲ ಎಣೆ ;
ಹಾಕಿ ಹಾಕಿ ಪರಭಾಷಿಗರಿಗೆ ಮಣೆ - ನಾವೇ ಮಾಡದಿದ್ದರೆ ನಮ್ಮ ಭಾಷೆಯ ರಕ್ಷಣೆ
ಕರ್ನಾಟಕದಲ್ಲೇ ಮತ್ತೆ ಭಾಷಾವಾರು ವಿಂಗಡಣೆ - ಆಗುವುದು 'ಕನ್ನಡದ ಬೆಳಕು' ಕಾಣದ ಕತ್ತಲ ಕೋಣೆ !
"ಕನ್ನಡ ಬಳಸಿ" - ಇದೇ ಕನ್ನಡದ ಪೋಷಣೆ, ಇದೇ ಈಗಿನ ಘೋಷಣೆ - ಇದೇ ಪ್ರತಿಯೊಬ್ಬ ಕನ್ನಡಿಗನಿಗೂ ಆದ್ಯ ಹೊಣೆ.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು !
-ಅನಿರುದ್ಧ