Monday, August 30, 2010

ಜೀವನ

ನೆಟ್ಟಗೆ ನೆಟ್ ನಿಂದ ಕದ್ದ ಚಿತ್ರ!
10 .09 .2009  
ಜೀವನ

ಜೀವನವಿದು ಕಾಣದ ಅಲೆಗಳ ಎದುರಿನ ಈಜು
ಮರಳು ಮುಗಿಯುವವರೆಗಷ್ಟೇ ಸಿಗುವುದು ಮೋಜು
ದಡದಿಂದ ಅಲೆಯೊರಗಿನ ಆಟವು ಕಾಣದವನೊಂದಿಗಿನ ಜೂಜು
ಅಲೆಯು ಬಂದಾಗ ದಡವ ನೋಡಿದರೆ-  ಒಡೆದ ಕನ್ನಡಿ ಗಾಜು.

-ಅನಿರುದ್ಧ 

Saturday, August 7, 2010

ಸ್ಫೂರ್ತಿ

ನೆಟ್ಟಲ್ಲಿ ಹಿಡಿದಿದ್ದು!
08 .09 .2009  
ಸ್ಫೂರ್ತಿ 

ಮಳೆ ಶುರುವಾದಾಗ ನಾನೇನೋ ಬರೆಯ ಹೋದೆ

ಮೋಡಗಳು ಕದಲಿದಾಗ ಪದಗಳನೇ ಕಾಣದಾದೆ

ಸದಾ ನೀನಿರುವಾಗ ಸ್ಪೂರ್ತಿಯ ಚಿಮ್ಮುವ ಬುಗ್ಗೆಯಂತೆ

ಬಂದು ನಿಲ್ಲುವ ತುಂತುರಿನ ಬಗೆಗೇಕೆ ಮಾಡಲಿ ಚಿಂತೆ?!


 -ಅನಿರುದ್ಧ 

Thursday, August 5, 2010

೨೦೦೮ನೇ ಇಸವಿಯಲ್ಲಿ ನಡೆದ ಅಂತರ-ಕಾಲೇಜು ಚರ್ಚಾಸ್ಪರ್ಧೆಯಲ್ಲಿ ನನ್ನ ವಾದ...

ಜಾಗತೀಕರಣದ ಕೂಗು ಭಾರತೀಯ ಸಂಸ್ಕೃತಿಗೆ ಮಾರಕ

(ವಿರೋಧ) 

ಮಾನ್ಯ ತೀರ್ಪುದಾರರೆ, ಪ್ರಿಯ ಗೆಳೆಯರೇ, ಎಲ್ಲರಿಗೂ ನಮಸ್ಕಾರ. ನಾಗಾರ್ಜುನ ಕಾಲೇಜಿನಲ್ಲಿ ನಾಲ್ಕನೇ ಸೆಮಿಸ್ಟರ್ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ನಾನು 'ಜಾಗತೀಕರಣದ ಕೂಗು ಭಾರತೀಯ ಸಂಸ್ಕೃತಿಗೆ ಮಾರಕ' ಎಂಬ ವಿಷಯದ ವಿರುದ್ಧವಾಗಿ ಮಾತನಾಡಲು ನಿಮ್ಮ ಮುಂದೆ ನಿಂತಿದ್ದೇನೆ.

ಇಡೀ ಪ್ರಪಂಚವೇ ಜಾಗತಿಕರನದೆಡೆಗೆ ಶರವೇಗದಲ್ಲಿ ಓಡುವ ಧೋರಣೆ ಅನುಸರಿಸುತ್ತಿರುವ ಪ್ರಸ್ತುತ ಕಾಲದಲ್ಲಿ ನಮ್ಮ ಭಾರತ ದೇಶವೂ ಸಹ ಮಂತ್ರಮುಗ್ಧವಾಗಿ ಇದೇ ನೀತಿಯನ್ನು ತನ್ನದಾಗಿಸಿಕೊಂಡಿದೆ. ಜಾಗತೀಕರಣ ಎಂಬ ಮಂತ್ರಕ್ಕೆ ಎಲ್ಲರೂ ಉದುರುವ ಮಾವಿನ ಕಯಿಗಳೇ! ಜಗತಿಕರನವೆಂಬ ಮಾಯೆಗೆ ಇಡೀ ವಿಶ್ವದ ನಕ್ಷೆಯನ್ನೇ ಬದಲಾಯಿಸುವ ಶಕ್ತಿಯಿರುವುದರಿಂದಲೇ ಸಕಲ ರಾಷ್ಟ್ರಗಳೂ ಈ ನೀತಿಯ ಹಿಂದೆ ಬಿದ್ದಿವೆ; ಈ ವಿಷಯದಲ್ಲಿ ನಮ್ಮ ದೇಶವೂ ಸಹ ಹಿಂದೆ ಬಿದ್ದಿಲ್ಲ!

ಈಗ ವಿಷಯಕ್ಕೆ ಸಮೀಪಿಸೋಣ... ನಮ್ಮ ದೇಶವು ಈಗಾಗಲೇ ಜಾಗತೀಕರಣ ನೀತಿಯನ್ನು ಅನುಸರಿಸುತ್ತಿರುವುದರಿಂದ, ಅದು ನಮ್ಮ ಶ್ರೀಮಂತ ಸಂಸ್ಕೃತಿಗೆ ಯಾವುದೇ ರೀತಿಯ ಹಾನಿಯುಂಟು ಮಾಡಿದೆಯೇ ಇಲ್ಲವೇ ಎಂಬ ಯೋಚನೆಯೇ ಅಪ್ರಸ್ತುತವಾಗುತ್ತದೆ. ಆದರೂ ಇಂದಿನ ನಮ್ಮ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರುವ ಬದಲಾವಣೆಗಳನ್ನೂ, ಬೆಳವಣಿಗೆಗಳನ್ನೂ ವಿಶ್ಲೇಷಿಸಿದಾಗ ಬೆಳಕಿಗೆ ಬರುವ ಅಂಶವೆಂದರೆ ನಮ್ಮೆಲ್ಲರ ಸುಖಬಾಳ್ವೆಗೆ ಜಾಗತಿಕರಣವೇ ಮೂಲ ಕಾರಣವೆಂಬ ಸತ್ಯ!

ಮನುಷ್ಯನು ತನ್ನ ಪರಾಕ್ರಮದ ಪರಾಕಾಷ್ಥೆಯನ್ನು ಮೆರೆಯುವ ಸಲುವಾಗಿ ಸದಾಕಾಲವೂ ಹೊಸದರ ಹುಡುಕಾಟದಲ್ಲೇ ಇರುತ್ತಾನೆ. ತತ್ಫಲವಾಗಿ ಭೂಮಿಯ ಮೇಲೆ ನಾನಾ ರೀತಿಯ ಸಂಶೋಧನೆಗಳೂ, ತನ್ಮೂಲಕ ಹೊಸ ಅನ್ವೇಷನೆಗಳೂ ನಡೆಯುತ್ತಲೇ ಇವೆ. ಇದರಿಂದ ಮಾನವ ಸಂಕುಲದ ವ್ಯಾಪ್ತಿ ಹೆಚ್ಚುತ್ತಲೇ ಹೋಗುತ್ತಿದೆ. ಪ್ರಾಣಿಗಳೂ ಬದುಕಲಾಗದಂತಹ ಜಾಗಗಳಲ್ಲೆಲ್ಲಾ ಮನುಷ್ಯನು ಬದುಕಿ ತೋರಿಸಿದ್ದಾನೆ. ಇಷ್ಟೇ ಸಾಲದೆಂಬಂತೆ ನಮ್ಮ ಜೀವನ ವ್ಯಾಪ್ತಿ ಇಂದು ಭೂಮಿಯನ್ನು ಮೀರಿ ಇನ್ನಾವ ಜೀವರಾಶಿಗಳೂ ಹುಟ್ಟಿರದಂತಹ ಚಂದ್ರ ಮಂಡಲ, ಮಂಗಳ ಗ್ರಹಗಳನ್ನು ತಲುಪಿದೆ ಎಂದರೆ ನಮ್ಮ ಪ್ರಪಂಚವು ಎಷ್ಟರ ಮಟ್ಟಿಗೆ ದೊಡ್ಡದಾಗಿ ಬೆಳೆದಿದೆ ಎಂಬುದನ್ನು ಊಹಿಸಿಕೊಳ್ಳಬಹುದು.

ಆದರೆ ಇಷ್ಟು ದೊಡ್ಡ ಪ್ರಪಂಚದ ಯಾವುದೇ ಮೂಲೆಯನ್ನು ಇನ್ನ್ಯಾವುದೇ ಮೂಲೆಯಿಂದ ಸಂಪರ್ಕಿಸಬಹುದೆಂದರೆ, ಅದು ಸಾಧ್ಯವಾಗಿರುವುದು ಜಾಗತೀಕರಣವೆಂಬ ಇಂದ್ರಜಾಲವು ಸೃಷ್ಟಿಸಿರುವ ಮಾಯೆಯಿಂದ ಮಾತ್ರವೇ ಎಂದರೆ ತಪ್ಪಾಗಲಾರದು. ಕೇವಲ ಕೆಲವೇ ವರ್ಷಗಳ ಹಿಂದಷ್ಟೇ ಕನಿಷ್ಠ ಅಂತರದಲ್ಲಿರುವ ಎರಡು ಜಾಗಗಳ ನಡುವೆ ವಿಷ್ಯ ವಿನಿಮಯವಾಗಬೇಕಾದರೆ ಅಸಹನೀಯ ಎನಿಸುವಷ್ಟು ಸಮಯ ಹಿಡಿಯುತ್ತಿತ್ತು. ಅದೇ ಇಂದು, ಬೆರಳ ತುದಿಯಲ್ಲಿಯೇ ಇಡಿ ವಿಶ್ವವನ್ನೇ ಸಂಪರ್ಕಿಸುವ ಸೌಖ್ಯವು ಅತೀ ಸಾಮಾನ್ಯ ಮನುಷ್ಯನಿಗೂ ದೊರಕುವನ್ತಾಗಿರುವುದು ಜಾಗತೀಕರಣವು ನಮ್ಮ ಪೀಳಿಗೆಗೆ ಕೊಟ್ಟ ವರವಾಗಿದೆ.

ಇಂದಿನ ನಮ್ಮ ಸಂಪರ್ಕ ಸಾಧನಗಳು ನಮ್ಮೆಲ್ಲಾ ಸಂತೋಷಗಳಿಗೆ ಜೊತೆ ಕೊಡುತ್ತಿರುವುದು ಸುಳ್ಳಲ್ಲ. "ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು" ಎಂಬ ಶೃಂಗಾರದ ಬಗೆಗಿದ್ದ ಮಾತು  "ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಕಿವಿಗೆ ಮೊಬೈಲ್ ಫೋನು" ಎಂದು ಬದಲಾಗಿರುವುದು  ನಮ್ಮ ಸುಖಕ್ಕೆ ಹಿಡಿದ ಕನ್ನಡಿಯಾಗಿದೆ. ನಮ್ಮ-ನಮ್ಮ ನಡುವಿನ ಸಂಬಂಧವನ್ನು ಹಸನಾಗಿಸಲು ಇಂದು ಲಭ್ಯವಿರುವ ಮೊಬೈಲ್ ಗಳಾಗಲೀ, ಪ್ರಪಂಚವನ್ನೇ ತೋರಿಸುವ ಅಂತರ್ಜಾಲವಾಗಲೀ, ತತ್ಕಾಲದಲ್ಲೇ ಸಕಲ ಆಗು-ಹೋಗುಗಳನ್ನು ಬಿತ್ತರಿಸುವ ದೂರದರ್ಷನವಾಗಲೀ, ಸದಾ ಖುಷಿಯಾಗಿಡುವ ರೇಡಿಯೋಗಲಾಗಲೀ ಎಲ್ಲವೂ ನಮ್ಮ ಸಂತಸವನ್ನು ದ್ವಿಗುಣಗೊಳಿಸಿ ಇಡೀ ವಿಶ್ವವನ್ನೇ ಕಿರಿದಾಗಿಸಿ ಕಿಸೆಯೊಳಗಿರಿಸಿದ ಸುಂದರ ಅನುಭವವನ್ನು ನೀಡುತ್ತಿರುವುದು ಜಾಗತೀಕರಣದ ಕೃಪೆಯಿಂದಲೇ ಎಂದು ನನ್ನ ಭಾವನೆ.

"ಬದಲಾವಣೆ ಬೆಳವಣಿಗೆಯ ಸಂಕೇತ" ಎಂಬುದು ಎಲ್ಲರೂ ಒಪ್ಪಿರುವ ಸತ್ಯ. ಪ್ರಸ್ತುತ ವಿಷಯದಲ್ಲಂತೂ ಜಾಗತೀಕರಣವು ತಂದಿರುವ ಬದಲಾವಣೆಗಳು ಅದ್ಧೂರಿ ಬೆಳವಣಿಗೆಯ ಸಂಕೇತವೇ ಆಗಿದೆ. ಆದರೆ ಕೆಲವು ಬುದ್ಧಿಜೀವಿಗಳೆಂದು ಕರೆದುಕೊಳ್ಳುವ ಜನಗಳ ಗುಂಪಿಗೆ ಈ ಬೆಳವಣಿಗೆಗಳು ನುಂಗಲಾರದ ತುತ್ತಾಗಿಗಿದೆ. ಎಲ್ಲಿ ತಮ್ಮ ಅಸಲೀ ಗುಣಗಳ ವಿಶ್ವರೂಪದರ್ಶನವಾಗುವುದೋ ಎಂಬ ಭಯದಲ್ಲಿ ಬೆಳವಣಿಗೆಯ ಶಿಖರದಲ್ಲಿ ವಿಜಯ ಪತಾಕೆ ಹಾರಿಸುತ್ತಿರುವ ಜಾಗತೀಕರಣಕ್ಕೂ, ಸ್ವಚ್ಚಂದವಾಗಿ ಆಗಸದೆತ್ತರದಲ್ಲಿ ಅಡೆತಡೆಗಳಿಲ್ಲದೆ ಹಾರಾಟ ನಡೆಸುತ್ತಿರುವ  ನಮ್ಮ ಶ್ರೇಷ್ಠ ಭಾರತೀಯ ಸಂಸ್ಕೃತಿಗೂ ತಳಕು ಹಾಕಲಾಗುತ್ತಿರುವುದು ದುರದೃಷ್ಟಕರವಾಗಿದೆ.

ಭಾರತೀಯ ಸಂಸ್ಕೃತಿಯೆಂಬುದು ಮಹಾಸಾಗರವಿದ್ದಂತೆ. ಅದು ಎಷ್ಟೇ ನದಿಗಳು ತನ್ನತ್ತ ಹರಿದು ಬಂದರೂ ತನ್ನೊಡಲಿಗೆ ಸೇರಿಸಿಕೊಳ್ಳುತ್ತದೆ. ಆ ನದಿಗಳು ಎಷ್ಟೇ ರಭಸದಲ್ಲಿ ಬಂದು ಸಾಗರವನ್ನು ಸೇರಿದರೂ ಸಹ ತಾಯಿಯೊಬ್ಬಳು ತನ್ನ ಮಗುವನ್ನು ಪ್ರೀತಿಯಿಂದ ಅಪ್ಪುವಂತೆ ತನ್ನ ಮಡಿಲಿಗೆ ಸೇರಿಸಿಕೊಳ್ಳುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯು ಮನುಷ್ಯನ ಎಲ್ಲಾ ಕಲ್ಮಷಗಳನ್ನೂ ತೊಳೆದು, ಬರುವ ನದಿಗಳನ್ನೆಲ್ಲಾ ಸೇರಿಸಿಕೊಳ್ಳುವ ಮಹಾಸಾಗರವೇ ಹೊರತು, ಯಾವುದೇ ಒಂದು ಕೊಲೆಯಿಂದ ಕಳುಶಿತಗೊಳ್ಳುವ ಕ್ಷೀರಸಾಗರವಲ್ಲ!

ಇದುವರೆವಿಗೂ ನಮ್ಮ ಸಂಸ್ಕೃತಿಯನ್ನು ಹಾಳುಗೆಡವಲು ವಿಶ್ವದಾದ್ಯಂತ ನಡೆದಿರುವ ವಿಧವಿಧವಾದ ಪ್ರಯತ್ನಗಳನ್ನೆಲ್ಲಾ ಕೂಲಂಕುಶವಾಗಿ ಪರಿಶೀಲಿಸಿದಾಗ, ನಮ್ಮ ತಾಯಿ ಸಮನಾದ ಸಂಸ್ಕೃತಿಯ ಮೇಲೆ ನಡೆದಿರುವ ಹಲ್ಲೆಯು ಪ್ರಪಂಚದ ಮತ್ತ್ಯಾವುದೇ ಸಂಸ್ಕೃತಿಯ ಮೇಲೆ ನಡೆದಿಲ್ಲವೆಮ್ಬುದು ತಿಳಿದುಬರುತ್ತದೆ. ಇಂತಹ ಮಾನಸಿಕ ಯಾತನೆಗಳನ್ನೆಲ್ಲಾ ಲೋಕಕಲ್ಯಾಣಕ್ಕಾಗಿ ವಿಷ ಕುಡಿದ ಶಿವನಂತೆ, ತನ್ನ ಒಡಲಿನಲ್ಲಿ ಹುದುಗಿಸಿಕೊಂಡು, ನಿರಂತರವಾಗಿ ನೀತಿಬೋಧೆ ಮಾಡಿ, ತಾಯಿಯಂತೆ ಮಮತೆಯನ್ನು ಧಾರೆಯೆರೆಯುತ್ತಿರುವ ನಮ್ಮ ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡುವುದೇ ಧ್ಯೇಯವಾದರೆ, ನಾವೇ ಅನುಸರಿಸುತ್ತಿರುವ ಜಾಗತೀಕರಣ ನೀತಿಯೇ ಲಕ್ಷಾಂತರ ಜನ್ಮವೆತ್ತಿ ಬಂದರೂ ಅದು ಸಾಧ್ಯವಾಗುವುದಿಲ್ಲ.

ರಾಮಾಯಣ, ಮಹಾಭಾರತ, ಭಗವದ್ಗೀತೆಗಳಂತಹ ಉನ್ನತ ಹಿನ್ನೆಲೆಯುಳ್ಳ ನಮ್ಮ ಮಾತೃ ಸಂಸ್ಕೃತಿಯು, ಹಾಳು ಮಾಡಲಾಗದಂತಹ, ಎಷ್ಟು ಉಪಯೋಗಿಸಿದರೂ ಬೆಳೆಯುತ್ತಲೇ ಇರುವಂತಹ, ಎಂದೆಂದೂ ನಶಿಸಲಾರದಂತಹ ಒಂದು ಅತೀ ಮಹತ್ವದ ಮೈಲಿಗಲ್ಲು. ಅದು ಯಾರ ಮೇಲೂ ಹೇರಲ್ಪಡುವಂತಹುದಲ್ಲ, ಬದಲಾಗಿ ಪ್ರಪಂಚದಲ್ಲೆಲ್ಲರೂ ಅನುಸರಿಸಲು ಹಾತೊರೆಯುತ್ತಿರುವ, ತಮ್ಮ ಬೆಳವಣಿಗೆಯು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರವೇ ಸಾಧ್ಯ ಎಂದು ನಂಬಿರುವಂತಹ, ಸಂಸ್ಕೃತಿಯೆಂಬ ಮಹಾಕಾವ್ಯದ ಅತೀ ಶ್ರೇಷ್ಟ, ಅತ್ಯುನ್ನತ ಅಧ್ಯಾಯವಾಗಿದೆ.

ಈ ಎಲ್ಲಾ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಸಂಪೂರ್ಣ ವಾಸ್ತವವಾದಿಗಳಾಗಿ ರಾಷ್ಟ್ರ ಸಂಸ್ಕೃತಿಯ ಹಿತವನ್ನೇ ಬಯಸುವುದಾದರೆ, ನಾವೀಗ ಅನುಸರಿಸುತ್ತಿರುವ ಜಾಗತೀಕರಣದ ನೀತಿಯು ಯಾವುದೇ ರೀತಿಯಲ್ಲಿ ನಮ್ಮ ಸಂಸ್ಕೃತಿಗೆ ಮಾರಕವಲ್ಲ, ಹಾಗೂ, ತತ್ಕಾಲದಲ್ಲಿ ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಈ ನೀತಿಯು ಪೂರಕವೇ ಆಗಿದೆ ಎಂಬುದು ತಿಳಿದು ಬರುತ್ತದೆ.

ಹೀಗಾಗಿ ನಾವೆಲ್ಲರೂ ವಾಸ್ತವವಾದಿಗಳಾಗೋಣ, ಜಾಗತೀಕರನವನ್ನೂ ಉತ್ತೇಜಿಸಿ ತನ್ಮೂಲಕ ನಮ್ಮ ಸಂಸ್ಕೃತಿಯ ಹಿತವನ್ನೂ ಕಾಪಾಡಲು ಕಂಕಣಬದ್ಧರಾಗಿ ಟೊಂಕ ಕಟ್ಟಿ ನಿಲ್ಲೋಣವೆಂಬ ಕರೆ ನೀಡುತ್ತಾ ನನ್ನ ವಾದವನ್ನು ಮುಗಿಸುತ್ತಿದ್ದೇನೆ.

ಜೈ ಹಿಂದ್, ಜೈ ಕರ್ನಾಟಕ.

-ಅನಿರುದ್ಧ
ಅಂತರ್ಜಾಲದಲ್ಲಿ ಜಾಲಾಡಿದ್ದು

Wednesday, August 4, 2010

ಕೊಕ್ಕೊಕ್ಕೋ ಕೋಳಿ

ಅಂತರ್ಜಾಲದಲ್ಲಿ ಬೇಟೆಯಾಡಿದ್ದು!!
01 .03 .2007  
ಕೊಕ್ಕೊಕ್ಕೋ ಕೋಳಿ
(ಇಟ್ಟರೆ ಸೆಗಣಿಯಾದೆ... ಸಾಲುಗಳ ಹಾದಿಯಲ್ಲಿ)

ಇಟ್ಟರೆ ಮೊಟ್ಟೆಯಾದೆ
ತಟ್ಟಿದರೆ ಆಮ್ಲೆಟ್ಆದೆ
ಮುಟ್ಟಿಸಿದರೆ ಮೆತ್ತಗಾದೆ
ನೀನಾರಿಗಾದೆಯೋ ಎಲೆ ಮಾನವ
ಕೊಕ್ಕೊಕ್ಕೋ ಕೋಳಿ ನಾನು

ಮಾಂಸಾಹಾರಿಗಳಿಗೆ ಶಕ್ತಿದಾತನಾದೆ
ತಿನ್ನದವರಿಗೆ ದುರ್ನಾಥನಾದೆ
ಆದರೂ ಕೋಳಿಜ್ವರ ಬಂದಾಗ ನೀ ಅನಾಥನಾದೆ
ನೀನಾರಿಗಾದೆಯೋ ಎಲೆ ಮಾನವ
ಕೊಕ್ಕೊಕ್ಕೋ ಕೋಳಿ ನಾನು

ಹೆಸರಿಗೆ ನಾ ಕುಕ್ಕಟ
ಸಾಯುವಾಗ ನನಗಾದರೂ ಸಂಕಟ
ಆಗುವೆ ನಿಮಗೆ ರುಚಿಯಾದ ಊಟ
ನೀನಾರಿಗಾದೆಯೋ ಎಲೆ ಮಾನವ
ಕೊಕ್ಕೊಕ್ಕೋ ಕೋಳಿ ನಾನು

ಸಾಕಿಕೊಂಡರೆ ಮನೆಯ ಪಕ್ಕ
ಸುಲಭವು ಮುಂಜಾನೆ ಏಳಲಿಕ್ಕ
ಇದ್ದರೂ, ಸತ್ತರೂ ಕೊಡುವೆ ಕೈತುಂಬಾ ರೊಕ್ಕ
ನೀನಾರಿಗಾದೆಯೋ ಎಲೆ ಮಾನವ
ಕೊಕ್ಕೊಕ್ಕೋ ಕೋಳಿ ನಾನು


-ಅನಿರುದ್ಧ